ಸ್ಥಾಪನೆ: 1991
ಬಸವ ವೇದಿಕೆ (ರಿ)
ಹಿನ್ನೋಟ
ಬೆಂಗಳೂರಿನ ವಿಚಾರವಂತ ಸಹೃದಯಿಗಳು ಬಸವಾದಿ ಶರಣರ ವಿಚಾರಗಳನ್ನು ಅರಿತುಕೊಂಡು,ಅವುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಚಾರ ಮಾಡಲು ಒಂದು ಸಂಘಟನೆಯ ಅಗತ್ಯವನ್ನು ಮನಗಂಡರು. ತ್ರಿಕಾಲಾಬಾದಿತವಾದ ಶರಣರ ಮೌಲ್ಯಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶವನ್ನು ರೂಪಿಸಿಕೊಂಡರು. ಶರಣರ ವೈಚಾರಿಕ ಹಾಗೂ ಜಾಗೃತ ಮನೋಭಾವ ಹೊಂದಿದವರನ್ನು , ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ಬಸವ ಜಯಂತಿ ಅಚರಣೆಯ ಸಮಾರಂಭದಲ್ಲಿ ಗೌರವಿಸುವ ಒಂದು ವಿನಮ್ರ ಪ್ರಯತ್ನವು ಬಸವ ವೇದಿಕೆ ಅಶ್ರಯದಲ್ಲಿ ಅತ್ಯಂತ ಯಶಸ್ವಿಯಾಗಿ ಮುಂದುವರೆದುಕೋಂಡು ಬರುತ್ತಿದೆ.
ಬಸವಣ್ಣನವರೇ ಮೊದಲಾದ ಶರಣರ ವಿಚಾರದಾರೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವ ದಿಟ್ಟ ಮಾರ್ಗವನ್ನು ಹಾಗೂ ಪ್ರಯತ್ನಶೀಲ ಹೆಜ್ಜೆ ಗುರುತುಗಳನ್ನು ಬಸವ ವೇದಿಕೆಯು ದಾಖಲಿಸುತ್ತಿದೆ. ಶರಣರ ಸತ್ಯ ಶುದ್ಧ ಸಂದೇಶಗಳ ಪರಿಪಾಲನೆಯ ಸಾಧನೆಗಾಗಿ ಬಸವ ವೇದಿಕೆಯು ಶರಣ ಸಂಸ್ಕೃತಿಯ ಒಂದು ಕ್ರಿಯಾತ್ಮಕ ಚಲನಶೀಲ ಸಂಸ್ಥೆಯಾಗಿ 1991 ರಲ್ಲಿ ಸ್ಥಾಪನೆಗೊಂಡಿತು. ಈ ವೇದಿಕೆಯ ಸ್ಥಾಪನೆ, ಕಾರ್ಯಯೋಜನೆಗಳ ಪರಿಕಲ್ಪನೆ ಮೂಡಿದ್ದು ಸಾಹಿತಿ, ಉನ್ನತ ಐಎಎಸ್ ಅದಿಕಾರಿ, ಜನಪ್ರಿಯ ವಾಗ್ಮಿ, ವಚನದಲ್ಲಿ ಅದ್ದಿದ ಮನಸ್ಸುಳ್ಳ ಡಾ. ಸಿ. ಸೋಮಶೇಖರ ಅವರಿಂದ. ಬೆಂಗಳೂರಿನಲ್ಲಿ ಬಸವ ಜಯಂತಿ ಆಚರಣೆಗೆ ಒಂದು ವಿಸ್ತೃತವಾದ ವಿಶಾಲತೆಯನ್ನು ಒದಗಿಸಿರುವ ಹೆಮ್ಮೆ ಇವರಿಗೆ ಹಾಗೂ ಬಸವ ವೇದಿಕೆಗೆ ಸಲ್ಲುತ್ತದೆ.
ಡಾ. ಸಿ. ಸೋಮಶೇಖರ ಅವರು ಮಂಡಿಸಿರುವ ಮಹಾ ಪ್ರಬಂದ ‘ವಚನಗಳಲ್ಲಿ ಸಾಮಾಜಿಕ ಚಿಂತನೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಿಲಿಟ್ ಪದವಿಯನ್ನು ಪ್ರದಾನ ಮಾಡಿದೆ. ವಚನ ಸಾಹಿತ್ಯವು ಅವರ ಬದುಕಿನ ನಡೆ-ನುಡಿಗಳಲ್ಲಿ ಹಾಸು ಹೊಕ್ಕಾಗಿರುವುದನ್ನು ಸಹ ನಾವು ಗುರುತಿಸಬಹುದಾಗಿದೆ. ವಚನ ಸಾಹಿತ್ಯದ ಪ್ರಚಾರ ಕಾರ್ಯವು ಅವರಿಂದ ನಿರಂತರವಾಗಿ ನಡೆಯುತ್ತಿದೆ. ತಮ್ಮ ಅದಿಕಾರದ ಅವದಿಯಲ್ಲಿಯೇ ಸಾಹಿತ್ಯ ಚಿಂತನೆ ಹಾಗೂ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರಿಗೆ ವಿಶೇಷ ಆಸಕ್ತಿ. ಅದರಲ್ಲಿಯೂ ವಿಶೇಷವಾಗಿ ವಚನಸಾಹಿತ್ಯದ ಬಗ್ಗೆ ಅವರು ನಡೆಸಿದ ದೀರ್ಘ ಅಧ್ಯಯನ ಹಾಗೂ ಅನುಭಾವದ ಪಲಶೃತಿಯೇ ಬಸವವೇದಿಕೆಯ ಸ್ಥಾಪನೆಗೆ ಮೂಲ ಪ್ರೇರಣೆ. ಬಸವ ವೇದಿಕೆ ನಡೆಸುವ ಕಾರ್ಯಕ್ರಮಗಳು ತಮ್ಮ ವೈಭವಕ್ಕೆ ಹಾಗೂ ಅರ್ಥಪೂರ್ಣತೆಗೆ ಪ್ರಸಿದ್ಧಿಯಾಗಿವೆ. ಬೆಂಗಳೂರಿನಲ್ಲಿ ಪ್ರತಿವರ್ಷವೂ ನಡೆಯುತ್ತಿರುವ ಕಾರ್ಯಕಮಗಳು ಜನಮಾನಸದಲ್ಲಿ ಸವಿನೆನಪಿನ ಅಚ್ಚೊತ್ತುತ್ತಾ ಬಂದಿವೆ. ಸಮಾರಂಭಗಳಲ್ಲಿನ ಅಚ್ಚುಕಟ್ಟುತನ, ಭಾಗವಹಿಸುವ ಪ್ರಖ್ಯಾತ ಸಾಹಿತಿಗಳು, ಕಲಾವಿದರು, ಹಿರಿಯ ಮುತ್ಸದ್ದಿಗಳು ಸಬೆ-ಸಮಾರಂಭಗಳ ಗಾಂಬೀರ್ಯವನ್ನು ಹೆಚ್ಚಿಸಿದ್ದಾರೆ, ತಮ್ಮ ಅಪಾರ ಮೆಚ್ಚುಗೆಯನ್ನು ಸೂಚಿಸಿ ಪೋತ್ಸಾಹಿಸಿದ್ದಾರೆ. ಸಾಂಸ್ಕೃತಿಕ ವಿಶಿಷ್ಟ ಕಾರ್ಯಕ್ರಮಗಳು ಪದೇ ಪದೇ ಮೆಲುಕುಹಾಕುವಂತೆ ಎಲ್ಲರ ನೆನಪಿನಲ್ಲಿ ಉಳಿದುಕೊಂಡಿವೆ. ಬಸವ ವೇದಿಕೆಯು ತನ್ನ ಬಹುಮುಖ್ಯ ಆಶಯದಂತೆ 1996 ರಿಂದ ನಾಡಿನ ಸೇವಾ ಗಣ್ಯರಿಗೆ ‘ಬಸವಶ್ರೀ’ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ. 1997 ರಿಂದ ಶರಣ ಸಾಹಿತ್ಯ, ಸಂಸ್ಕೃತಿಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯಾತಿಗಣ್ಯರನ್ನು ಗುರುತಿಸಿ ‘ವಚನಸಾಹಿತ್ಯಶ್ರೀ ಪ್ರಶಸ್ತಿಯನ್ನೂ ನೀಡಲು ತನ್ನ ಸಂಪ್ರದಾಯವನ್ನು ಇಮ್ಮಡಿಗೊಳಿಸಿಕೊಂಡಿದೆ. ಇಂದಿನ ಆದುನಿಕ ಬದುಕು ಎದುರಿಸುತ್ತಿರುವ ಮೌಢ್ಯ ಹಾಗೂ ಸ್ವಾರ್ಥತೆಯನ್ನು ಪ್ರತಿರೋದಿಸಲು ಬೇಕಾದ ಉತ್ತರ ಮತ್ತು ಸ್ಥೈರ್ಯಗಳನ್ನು ತುಂಬಿಕೊಡುವ ಮಾರ್ಗದಲ್ಲಿ ಬಸವ ವೇದಿಕೆಯು ನಿರಂತರವಾಗಿ ಪಯತ್ನಿಸುತ್ತಿದೆ.