image

MUTHINAHARA

ಮುತ್ತಿನಹಾರ

ಕನ್ನಡನಾಡಿನ ಆಡಳಿತ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತುಂಬಾ ಪರಿಚಿತವಾದ ಹೆಸರು ಡಾ: ಸಿ. ಸೋಮಶೇಖರ್. ಅವರು ಆಡಳಿತ ಕ್ಷೇತ್ರದಲ್ಲಿ ಅಧಿಕಾರಿಯಾಗಿ ಸ್ಪಂದಿಸಿದವರು. ಸಾಹಿತ್ಯ ಸಾಂಸ್ಕೃತಿಕ ಪ್ರಜ್ಞೆ ಅರಳಿಸಿದವರು. ಸಾಮಾಜಿಕ ಕ್ಷೇತ್ರದಲ್ಲಿ ಸೇವಾ ಮನೋಧರ್ಮ ಮೆರೆದವರು. ಆಡಳಿತ - ಸಂಸ್ಕೃತಿಯಲ್ಲಿ ಸಮನ್ವಯ ಸಾಧಿಸಿ ಅಧಿಕಾರಿ ಸಮೂಹಕ್ಕೆ ಮಾದರಿಯಾದವರು. ಆಡುಮುಟ್ಟದ ಸೊಪ್ಪಿಲ್ಲ ಎಂಬ ನಾಣ್ನುಡಿಯಂತೆ ಸಾರ್ವಜನಿಕ ಬದುಕಿನ ಎಲ್ಲಾ ಆಯಾಮಗಳನ್ನು ಕಂಡವರು. ಆಯಾಯ ರಂಗಗಳ ಹಿರಿಯರ ಕಣ್ಬೆಳಕಿನಲ್ಲಿ ಬದುಕನ್ನು ನಿರ್ಮಲವಾಗಿಸಿಕೊಂಡವರು. ಒಬ್ಬ ದಕ್ಷ ಆಡಳಿತಗಾರರಾಗಲು ಸಾಧ್ಯವಾದದ್ದು ಅವರೊಳಗಿನ ಸಾಂಸ್ಕೃತಿಕ ಬದ್ಧತೆಯಿಂದ. ಮಾನವೀಯ ಮೌಲ್ಯಗಳ ಸಾಕಾರದಿಂದ. ಅವರ ಸಂವೇದನಾಶೀಲ ಹೃದಯ ಸಂಪನ್ನ ಮನಸ್ಸಿನಿಂದ. ಆಡಳಿತದಲ್ಲಿ ಮೂಲ ನೆಲೆ ಕಂಡುಕೊಂಡ ಅವರು ಸಾಂಸ್ಕೃತಿಕ ಬದುಕಿನಲ್ಲಿ ಸಾರ್ಥಕ್ಯ ಪಡೆದುಕೊಂಡವರು. ಅವರು ಕಾರ್ಯನಿರ್ವಹಿಸಿದ ಇಲಾಖೆಗಳಲ್ಲೆಲ್ಲಾ ಭಾವನಾತ್ಮಕ ಸಂಬಂಧ ಉಳಿಸಿಕೊಂಡವರು. ಸಹೋದ್ಯೋಗಿಗಳಿಗೆ ಸಹಬಾಳ್ವೆಯ ಸಿಂಚನ ನೀಡಿದವರು. ಎಲ್ಲರನ್ನೂ ಸಮಾನವಾಗಿ ಕಂಡ ಅಪರೂಪದ ಸ್ನೇಹಜೀವಿ. ಅವರ ಆಡಳಿತಾತ್ಮಕ / ವೃತ್ತಿ ಜೀವನದ ಯಶಸ್ಸಿಗೆ ಹೆಚ್ಚು ಸಹಕಾರಿಯಾದದ್ದು ಅವರ ಅಭಿವ್ಯಕ್ತಿ ಸಾಮರ್ಥ್ಯ . ಸುಮಾರು ೨೦ ವರ್ಷಗಳಿಂದ ಹತ್ತಾರು ಸಮಾರಂಭಗಳಲ್ಲಿ ಅವರ ವಾಕ್ಪಟುತ್ವವನ್ನು ಕಂಡು ಬೆರಗಾದವರಲ್ಲಿ ನಾನು ಒಬ್ಬ. ಅವರು ಯಾವುದೇ ಸಮಾರಂಭದಲ್ಲಿ ಎದ್ದು ನಿಂತು ಮಾತು ಪ್ರಾರಂಭಿಸುವಾಗ ಇಡೀ ಸಹೃದಯ ಶ್ರೋತೃಗಳು ಅವರ ದನಿಗೆ ಕಿವಿಯಾಗುತ್ತಾರೆ. ವಿಷಯದ ಮೇಲಿನ ಹಿಡಿತ, ಮಾತಿನ ಗಾಂಭೀರ್ಯ ಕನ್ನಡ ಪದಗಳನ್ನು ಬಳಸುವ ಶೈಲಿ, ಸಮಯದ ಸಂಯಮ ಅಪೂರ್ವವಾದುದು. ಅವರ ಮಾತಿನ ಕಲೆ ಮನಸ್ಸನ್ನು, ಹೃದಯವನ್ನು ಹತ್ತಿರದಿಂದಲೇ ಸೆಳೆದುಬಿಡುತ್ತದೆ. ‘ಮಾತಿಗಾಗಿ ಮಾತಲ್ಲದೆ ಮುತ್ತಿನಂತ ಮಾತುಗಳನ್ನು ಶಾಶ್ವತವಾಗಿ ಸಹೃದಯರ ಹೃದಯಲ್ಲಿ ನೆಲೆಯಾಗಿಸುವ ಅವರ ಒಂದು ವಿಶಿಷ್ಟ ಬಗೆಯನ್ನು ನನ್ನಂತೆ ಸಾವಿರಾರು ಜನರು ಕಾಣುತ್ತಾ ಬಂದಿದ್ದಾರೆ. ಡಾ: ಸಿ. ಸೋಮಶೇಖರ ಅವರದು ವರ್ಣಮಯ ವ್ಯಕ್ತಿತ್ವ. ಅವರಂತೆ ಸಾಮಾನ್ಯರಿಂದ ಹಿಡಿದು ಅಸಾಮಾನ್ಯರ ವರೆವಿಗೂ ಏಕೋಭಾವದಿಂದ ನಡೆದವರು ಬಹಳ ವಿರಳ. ಶ್ರಮಿಕ, ಕೃಷಿಕ, ಕಾರ್ಮಿಕ, ಅಧಿಕಾರಿ, ಶಾಸಕ, ಮಂತ್ರಿ... ಹೀಗೆ ಹಲವು ಜನರನ್ನು ತಮ್ಮ ಸಹೃದಯತೆಯಿಂದ ಹಾಸ್ಯಮನೋಭಾವದಿಂದ ಆಕರ್ಷಿಸಿ ಅವರೆಲ್ಲರ ಮೇಲೆ ಸಮಾನವಾದ ಪ್ರೀತಿಯನ್ನು ಸುರಿಸುವ ಸಾಮರ್ಥ್ಯ ಸಿ. ಸೋಮಶೇಖರ್ ಅವರದು. ಇವರು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಕನ್ನಡ ಡಿಂಡಿಮ ಬಾರಿಸಿದವರು. ಶರಣ ತತ್ವವನ್ನು ಪ್ರಚುರಪಡಿಸಿದವರು. ಆಡಳಿತದಲ್ಲಿ ಕನ್ನಡವನ್ನು ಮೆರೆಸಿದವರು. ಡಾ: ಸಿ. ಸೋಮಶೇಖರ್‌ರವರಿಗೆ ಈಗ ಅರವತ್ತರ ಪ್ರಾಯ. ಕರ್ನಾಟಕದ ಮುತ್ತಿನಹಾರದಂತಿರುವ ಇವರು ಹಲವಾರು ಯೋಜನೆಗಳ ಧೀರ ಪ್ರಕಲ್ಪಗಳ ಮಾನ್ಯರು. ಸದಾ ಸ್ಥಿತಪ್ರಜ್ಞ್ಞತೆಯಿಂದ ಎಂತಹ ಕಠಿಣ ಪ್ರಸಂಗಗಳನ್ನು ಎದುರಿಸಿದಂಥವರು. ತಾವು ನಡೆದುಬಂದ ದಾರಿಯನ್ನು ಎಂದೂ ಮರೆಯದಂತವರು. ಒಂದುಕಡೆ ಜನ್ಮಕೊಟ್ಟ ತಾಯಿಯ ತ್ಯಾಗ, ಆದರ್ಶ. ಮತ್ತೊಂದು ಕಡೆ ಶರಣರ ಕಾಯಕ ನಿಷ್ಠೆ ದಾಸೋಹತತ್ವ ಇವುಗಳನ್ನು ತಮ್ಮ ಬದುಕಿನ ಉದ್ದಕ್ಕೂ ಅವಿನಾಭಾವವಾಗಿ ಬಳಸಿಕೊಂಡು ಬೆಳೆಸಿಕೊಳ್ಳುತ್ತಿದ್ದಾರೆ. ತಮ್ಮ ಬದುಕಿನಲ್ಲಿ ಕಾರ್ಯದಕ್ಷತೆ , ಸರಳತೆ , ಸ್ನೇಹಭಾವ , ಸೌಜನ್ಯಶೀಲತೆ ಹಾಗೂ ವಿನಯವಂತಿಕೆಯ ಹಿರಿಮೆಯನ್ನು ಸಾರುತ್ತಾ ಸಮಸ್ತರ ಕಣ್ಮಣಿಯಾಗಿ, ಕುಟುಂಬದ ಗಣಿಯಾಗಿ, ಗೆಳೆಯರ ಸದ್ಭಾವನಾ ಸಿರಿಯಾಗಿ, ಹಿರಿಯರ ಹೆಮ್ಮೆಯ ಕೂಸಾಗಿ ನಾಡಿನ ಎಲ್ಲಾ ಮಠಾಧಿಪತಿಗಳ ಆಶೀರ್ವಾದದ ಫಲವಾಗಿ ಮುತ್ತಿನ ಹಾರದಂತೆ ನಿರ್ಮಲವಾಗಿ ಕಂಗೊಳಿಸುತ್ತಿರುವ ಡಾ: ಸಿ. ಸೋಮಶೇಖರ್‌ರವರು ಅರವತ್ತಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಅವರ ಅಪಾರ ಅಭಿಮಾನಿಗಳ ಬಳಗ ತಮ್ಮ ಅಭಿಮಾನದ ಸಂಕೇತವಾಗಿ ಮುತ್ತಿನಹಾರ ಎಂಬ ಅಭಿನಂದನಾ ಸಂಪುಟವನ್ನು ಅವರಿಗೆ ಪ್ರೀತಿಯಿಂದ ಅರ್ಪಿಸುತ್ತಿದ್ದಾರೆ.

ಕರ್ನಾಟಕವು ಹೆಮ್ಮೆಪಡಬಹುದಾದ ಅಧಿಕಾರಿಗಳಲ್ಲಿ ಶ್ರೀ ಸೋಮಶೇಖರ್ ಅವರು ನಿರ್ವಿವಾದವಾಗಿ ಅಗ್ರಗಣ್ಯರು . ಬಸವಣ್ಣನವರ ವಚನದ ಸಾಲೊಂದು ಈ ಅಭಿನಂದನಾ ಸಂಪುಟಕ್ಕೆ ಪ್ರೇರಣೆಯನ್ನು ನೀಡಿದೆ.

ನುಡಿದರೆ ಮುತ್ತಿನಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫ್ಪಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿರ್ದಡೆ
ಕೂಡಲಸಂಗಮ ದೇವನೆಂತೊಲಿವನಯ್ಯಾ
ಎಂಬಂತೆ-

ಮುತ್ತು ಸಮುದ್ರದಾಳದಲ್ಲಿ ಇರುತ್ತದೆಯಷ್ಟೆ . ಆಳಕ್ಕೆ ಇಳಿದು ಆ ಮುತ್ತನ್ನು ತರುವುದು ಸಾಹಸ ಧರ್ಮದ ಒಂದು ಬಗೆ. ಇಂತಹ ಸಾಹಸವನ್ನು ಬದುಕಿನುದ್ದಕ್ಕೂ ನಡೆಸಿದವರು ಶ್ರೀ ಸಿ.ಸೊಮಶೇಖರ್‌ರವರು. ಸಾಹಸಪ್ರವೃತ್ತಿ ಅವರ ಜೀವನದ ಒಂದು ಶೈಲಿ. ಬಸವಣ್ಣನವರು ನುಡಿದರೆ ಮುತ್ತಿನಹಾರದಂತಿರಬೇಕು ಎಂದಿದ್ದಾರೆ. ಮಾತಿಗೂ ಮುತ್ತಿಗೂ ಅವಿನಾಭಾವ ಸಂಬಂಧವನ್ನು ಕಲ್ಪಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನೂ ಮಾತನ್ನು ಮುತ್ತಿನಂತೆ ಬಳಸಬೇಕೆಂಬುದು ಬಸವಣ್ಣನವರ ಅಂತರಂಗದ ಇಚ್ಛೆ. ಅದು ಅಂತರಂಗದ ಬೆಳಕಾಗಿ ಪರಿಣಮಿಸಬೇಕೆಂಬುದು ಆ ವಚನದ ಇಂಗಿತಾರ್ಥ. ಡಾ: ಸಿ. ಸೋಮಶೇಖರ‌ ಅವರಲ್ಲಿ ಮುತ್ತಿನಹಾರ ಪ್ರತಿಮೆಯು ಬಹಿರಂಗ ಮತ್ತು ಅಂತರಂಗದ ಸಂಕೇತವಾಗಿ ನಿಲ್ಲುತ್ತದೆ. ಈ ಅಭಿನಂದನಾ ಸಂಪುಟವನ್ನು ಸಿದ್ದಪಡಿಸುವಾಗ ನಾಡಿನಾದ್ಯಂತ ಇರುವ ಅನೇಕ ಲೇಖಕರು ನಮ್ಮ ಕೋರಿಕೆಯನ್ನು ಮನ್ನಿಸಿ ನಮಗೆ ಲೇಖನಗಳನ್ನು ಕೊಟ್ಟು ಅಭಿನಂದನಾ ಸಂಪುಟದ ಘನತೆಯನ್ನು ಹೆಚ್ಚಿಸಿದ್ದಾರೆ. ಡಾ: ಸಿ. ಸೋಮಶೇಖರ್ ಅವರೊಡನೆ ಇದ್ದ ಆತ್ಮೀಯ ಪ್ರಸಂಗವನ್ನು ಅವರು ನಿರೂಪಿಸಿದ್ದಾರೆ. ಲೇಖಕರ ಭಾವಕೋಶದಲ್ಲಿ ನೆಲೆನಿಂತ ಸೋಮಶೇಖರ್‌ರವರ ವಿಶಿಷ್ಟಬಗೆಯನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಈ ಅಭಿನಂದನಾ ಸಂಪುಟವನ್ನು ‘ ವಿಶಿಷ್ಟಬಗೆ ಯಾಗಿ ಹೊರತರಲು ನಮಗೆ ಸಾಧವಾಗಿದೆ. ಮೊದಲಿಗೆ ನಾಡಿನ ಸುವಿಖ್ಯಾತ ಮಠಸಂಸ್ಥಾನಗಳ ಪೀಠಾಧ್ಯಕ್ಷರುಗಳು ಆಶೀರ್ವಾದದ ಹೂಮಳೆಯನ್ನು ಸುರಿಸಿದ್ದಾರೆ. ಹಿರಿಯರಾದ, ಕರ್ನಾಟಕದ ಭೀಷ್ಮ- ವಿಶ್ರಾಂತ ಕುಲಪತಿ ಪ್ರೊ: ದೇ.ಜ.ಗೌ. ಅವರಿಂದ ಹಿಡಿದು ಅನೇಕ ಹಿರಿಯ ಸಾಹಿತಿಗಳು , ಗಣ್ಯಮಾನ್ಯರು ಲೇಖನಗಳನ್ನು ಕೊಟ್ಟು ಈ ಸಂಪುಟದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಈ ಸಂಪುಟಕ್ಕೆ ಕಲಾವಿದರು, ಸಂಗೀತಗಾರರು , ಕವಿಗಳು , ಲೇಖಕರು , ಬರಹಗಾರರು , ಅಧಿಕಾರಿಗಳ ಆದಿಯಾಗಿ ಲೇಖನಗಳನ್ನು ಕೊಟ್ಟು ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ಅವರೆಲ್ಲರಿಗೂ ಧನ್ಯತಾಪೂರ್ವಕ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಈ ಅಭಿನಂದನಾ ಸಂಪುಟವು ಹಲವು ಸ್ನೇಹವಂತರ ಫಲವಾಗಿ ರೂಪುಗೊಂಡಿದೆ. ಹತ್ತಾರು ಕೈಗಳು ಈ ಸಂಪುಟದ ಹಿಂದೆ ಕೆಲಸಮಾಡಿವೆ. ಪ್ರಧಾನವಾಗಿ ಈ ಸಂಪುಟದ ಸಿದ್ಧತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀ. ಎಂ. ವಿಶ್ವನಾಥ್ ಅವರ ಶ್ರಮ ಎಣೆಯಿಲ್ಲದ್ದು. ಅವರೊಡನೆ ಸಮಾನವಾಗಿ ತೊಡಗಿಸಿಕೊಂಡು ಲೇಖನಗಳ ಪರಿಷ್ಕಾರಕ್ಕೆ ಕಾರಣೀಭೂತರಾದವರು ಕವಿ ಶ್ರೀ ಜರಗನಹಳ್ಳಿ ಶಿವಶಂಕರ್ . ಈ ಇಬ್ಬರು ಸ್ನೇಹಿತರ ಶ್ರಮದಫಲ ಈ ಅಭಿನಂದನಾ ಸಂಪುಟ. ಈ ಸಂಪುಟವು ಅಂತಿಮ ಸ್ವರೂಪ ಪಡೆಯುವ ಹೊತ್ತಿನಲ್ಲಿ ಡಾ: ಸಿ. ಸೋಮಶೇಖರ್‌ರವರ ಧರ್ಮಪತ್ನಿ ಶ್ರೀಮತಿ ಸರ್ವಮಂಗಳ ನೀಡಿದ ಸಹಕಾರ ಸ್ಮರಣೀಯವೇ ಸರಿ. ಈ ಅಭಿನಂದನಾ ಸಂಪುಟವು ಸಾಂಘಿಕ ಶಕ್ತಿಯ ಫಲವಾಗಿದೆ. ಇಲ್ಲಿ ಹೆಸರಿಸದಿರುವ ಹತ್ತಾರು ಮುಖಗಳು ನನ್ನಮುಂದೆ ಸುಳಿಯುತ್ತವೆ. ಬಸವಣ್ಣನವರ ಕಾಯಕ ಹಿರಿಮೆ ಇರುವುದು ಪ್ರದರ್ಶನದಲ್ಲಲ್ಲ, ಅನುವರ್ತನದಲ್ಲಿ ಮಾತ್ರ . ಇಂತಹ ಅನುವರ್ತನದ ಫಲವೇ ‘ಮುತ್ತಿನಹಾರ. ಈ ಅಭಿನಂದನಾ ಸಂಪುಟವನ್ನು ಡಾ: ಸಿ. ಸೋಮಶೇಖರ್ ಅವರಿಗೆ ನಾಡಿನ ಅವರ ಅಭಿಮಾನಿ ಬಳಗದವರೆಲ್ಲರ ಪರವಾಗಿ ಸಹೃದ್ಭಾವದಿಂದ ಅರ್ಪಿಸುತ್ತಿದ್ದೇನೆ.

ಪ್ರೊ: ಮಲ್ಲೇಪುರಂ ಜಿ. ವೆಂಕಟೇಶ ಪ್ರಧಾನ ಸಂಪಾದಕ

main-img
main-img
main-img
main-img
main-img